ತಾಮಸ್, ಡೆಲ್ಯಾನ್ ಮಾರ್ಲೇ
	1914-1953. ಇಂಗ್ಲಿಷ್ ಕವಿ. ಹುಟ್ಟಿದ್ದು ಸ್ವಾನ್‍ಸೀಯಲ್ಲಿ. ತಂದೆ ಇಂಗ್ಲಿಷ್ ಶಿಕ್ಷಕನಾಗಿದ್ದ ಸ್ವಾನ್‍ಸೀಗ್ರಾಮರ್ ಶಾಲೆಯಲ್ಲಿ ಈತನ ಶಿಕ್ಷಣವಾಯಿತು. ಚಿಕ್ಕಂದಿನಿಂದಲೇ ಕವಿತೆಗಳನ್ನು ಬರೆಯತೊಡಗಿದ. ಈತನ ಆಗಿನ ಕೆಲವು ಕವಿತೆಗಳು ಸಂಡೇ ರೆಫ್ರೀ ಎಂಬ ಪತ್ರಿಕೆಯಲ್ಲಿ ಅಚ್ಚಾದವು. 1934 ರಲ್ಲಿ ಈತ ಪ್ರಕಟಿಸಿದ ಎಯ್‍ಟೀನ್ ಪೊಯೆಮ್ಸ್ ಎಂಬ ಈತನ ಮೊದಲ ಕವನ ಸಂಗ್ರಹ ಡೇಮ್ ಎಡಿತ್‍ಸಿಟ್ಟೆಲ್ಲಳ ಮೆಚ್ಚುಗೆಗೆ ಪಾತ್ರವಾಯಿತು. 1936 ರಲ್ಲಿ ಕೈತ್ಲಿನ್ ಮ್ಯಾಕ್‍ನಾಮಾರಾಳೊಂದಿಗೆ ಈತನ ವಿವಾಹವಾಯಿತು. ಅದೇ ವರ್ಷ ಈತನ ಟ್ವೆಂಟೀಫೈವ್ ಪೊಯೆಮ್ಸ್ ಎಂಬ ಕವನ ಸಂಗ್ರಹ ಬೆಳಕಿಗೆ ಬಂತು. 1938 ರಲ್ಲಿ ಈತ ಪೊಯೆಟ್ರೀ ಎಂಬ ಚಿಕಾಗೋ ಪತ್ರಿಕೆಯ ಬಹುಮಾನ ಪಡೆದ. 1939 ರಲ್ಲಿ ಈತನ ಸಣ್ಣ ಕತೆಗಳು, ಶಬ್ದ ಚಿತ್ರಗಳು, ಪ್ರಬಂಧಗಳೇ ಮೊದಲಾದ ಗದ್ಯ ಕೃತಿಗಳನ್ನೊಳಗೊಂಡ ದಿ ಮ್ಯಾಪ್ ಆಫ್ ಲವ್ ಎಂಬ ಕೃತಿ ಪ್ರಕಟವಾಯಿತು. 1940 ರಲ್ಲಿ ಪೋಟ್ರ್ರೇಟ್ ಆಫ್ ದಿ ಆರ್ಟಿಸ್ಟ್ ಆ್ಯಸ್ ಎ ಯಂಗ್ ಡಾಗ್ ಎಂಬ ವಿನೋದಪೂರ್ಣ ಆತ್ಮಕಥಾನಕ ಶಬ್ದ ಚಿತ್ರಗಳ ಸಂಗ್ರಹವನ್ನು ಪ್ರಕಟಿಸಿದ. ಡೆತ್ಸ್ ಅಂಡ್ ಎಟ್ರನ್ಸಸ್ (1946) ಮತ್ತು ಇನ್ ಕಂಟ್ರಿ ಸ್ಲೀಪ್ (1951)-ಇವು ಈತನ ಅತ್ಯುತ್ತಮ ಕವನಸಂಗ್ರಹಗಳು. 1952 ರಲ್ಲಿ ಕಲೆಕ್ಟೆಡ್ ಪೊಯೆಮ್ಸ್ ಎಂಬ ಕವನಸಂಗ್ರಹ ಹೊರಬಂದಿತು. ಆರಂಭದಲ್ಲಿ ಈತ ಕೆಲಕಾಲ ಸೌತ್ ವೇಲ್ಸ್ ಈವ್ನಿಂಗ್ ಪೋಸ್ಟ್ ಎಂಬ ಪತ್ರಿಕೆಗೆ ವರದಿಗಾರನಾಗಿದ್ದ. ದ್ವಿತೀಯ ಮಹಾಯುದ್ಧದ ಸಮಯಕ್ಕೆ ಸೈನಿಕ ಸೇವೆ ಸಲ್ಲಿಸಲು ಅನರ್ಹನೆಂದು ಕಂಡಾಗ ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೋರೆಷನ್ನಿನಲ್ಲಿ ಪ್ರಸಾರಕನಾಗಿ ಸೇರಿಕೊಂಡು ಅನೇಕ ಪ್ರಸಾರ ಲೇಖನಗಳನ್ನು ಬರೆದ. ಇವುಗಳಲ್ಲಿ ಕೆಲವು ಈತನ ಮರಣಾನಂತರ ಪ್ರಕಟಿಸಲ್ಪಟ್ಟ ಕ್ಲೈಟ್ ಅರ್ಲಿ ಒನ್ ಮಾರ್ನಿಂಗ್ ಎಂಬ ಕೃತಿಯಲ್ಲಿವೆ (1954). ಈತ ಒಳ್ಳೆಯ ರೇಡಿಯೋ ಪ್ರಸಾರಕನೆಂದು ಹೆಸರು ಗಳಿಸಿದ್ದ. ನ್ಯೂಯಾರ್ಕ್‍ನಲ್ಲಿ, ತನ್ನ ಅಂಡರ್ ಮಿಲ್ಕ್ ವುಡ್ ನಾಟಕವನ್ನು ಪರಿಷ್ಕರಿಸಿ ಪ್ರದರ್ಶನಾಭ್ಯಾಸ ಮಾಡುತ್ತಿರುವಾಗ ಈತ ಸತ್ತ. ಇದೂ, ಅಡ್ವೆಂಚರ್ಸ್ ಇನ್ ದಿ ಸ್ಕಿನ್ ಟ್ರೇಡ್, ಮತ್ತು ಎ ಪ್ರಾಸ್ಪೆಕ್ಟ್ ಆಫ್ ದಿ ಸೀ ಇವು ಈತನ ಮರಣಾನಂತರ ಪ್ರಕಟಗೊಂಡವು. 

	ಈತ ತನ್ನ ನಿತ್ಯಜೀವನದಲ್ಲಿ ತುಂಬ ಅಜಾರೂಕತೆಯಿಂದ ವರ್ತಿಸುತ್ತಿದ್ದನಾದರೂ ಸಾಹಿತ್ಯಿಕ ಪ್ರಪಂಚದಲ್ಲಿ ಜಾಗರೂಕನಾಗಿದ್ದ. ಎಲ್ಲ ಮಾನವೀಯ ಮತ್ತು ನೈಸರ್ಗಿಕ ಕಾರ್ಯಗತಿಗಳಲ್ಲಿ ಈತ ಕಾಣುತ್ತಿದ್ದ ದೈವಸಂಕಲ್ಪದ ಶ್ಲಾಘನೆಯೇ ಈತನ ಕವಿತೆಗಳ ಉದ್ದೇಶವಾಗಿದೆ. ಮುಗ್ಧ ಮಗುವಿನ ದೃಷ್ಟಿಯಿಂದ ಜೀವನವನ್ನು ಪರಿಕಿಸಿರುವ ಒಂದು ನೋಟವನ್ನು ಈತನ ಕೊನೆಯ ಕೆಲವು ಉತ್ತಮ ಕವನಗಳಲ್ಲಿ ಕಾಣಬಹುದು. ಈತನ ಶೈಲಿ ಹಾಗೂ ಪದವಿನ್ಯಾಸವನ್ನು ನೋಡಿದರೆ ಈತನ ಮೇಲೆ ಜೇಮ್ಸ್ ಜಾಯ್ಸ್ ಮತ್ತು ಜಿ. ಎಂ. ಹಾಪ್‍ಕಿನ್ಸ್‍ರ ಪ್ರಭಾವ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. 				(ಜಿ.ಕೆಯು.) 

			ಟಿ ಎಸ್ ಎಲಿಯೆಟ್‍ನ ಭಾರರಹಿತವೇ ಎನ್ನಬಹುದಾದ ಸಂಯಮಶೀಲ ಕವನಗಳನ್ನು ಓದುತ್ತಿದವರಿಗೆ ತಾಮಸ್‍ನ ಭಾಷೆಯ ಹೊಸ ಪ್ರತಿಮೆಗಳು ಉತ್ಸಾಹವನ್ನು ಮೂಡಿಸಿದವು. ಇವನ ಕವನಗಳ ತವಕದ, ಭಾವದ ಉತ್ಕಟತೆಯೂ ಅನುಭವವು ಭಿನ್ನವಾಗಿತ್ತು. ಮನುಷ್ಯ ಮತ್ತು ನೈಸರ್ಗಿಕ ಪರಿಸರ, ಕಾಲದ ಪ್ರವಾಹ ಮತ್ತು ಮನುಷ್ಯನ ಪ್ರತ್ಯೇಕ ಅಸ್ತಿತ್ವ, ಬದುಕಿರುವವರ ಮತ್ತು ಸತ್ತವರ ಸಂಬಂಧ ಇವೆಲ್ಲ ತಾಮಸ್‍ನ ಕವನಗಳ ವಸ್ತುಗಳು. ಕಾಲ ಕಳೆದಂತೆ ತಾಮಸ್ ಎಲ್ಲ ಬದುಕಿನ ಏಕತ್ವವನ್ನು ಕುರಿತು ಬರೆದ. 1946ರಲ್ಲಿ ಪ್ರಕಟವಾದ ಡೆತ್ಸ್ ಅಂಡ್ ಎನ್‍ಟ್ರೆನ್ಸಸ್ ಕವನ ಸಂಗ್ರಹದ ಹಲವು ಕವನಗಳಲ್ಲಿ ಡಿಲಾನ್ ತಾಮಸ್ ಯುದ್ಧದಲ್ಲಿ ತನಗಾದ ಅನುಭವಗಳನ್ನು ಬಳಸಿಕೊಂಡ. ಇಂಗ್ಲೆಂಡಿನಲ್ಲಿ ವೃತ್ತಿ ಯೋಧನಲ್ಲದೆ ಮೊದಲನೆಯ ಯುದ್ಧದ ಕವಿ ಇವನು. ಕಾಮ, ಸಾವು, ಧರ್ಮ, ಸಾವಿನ ನಂತರ ಉದ್ಧಾರ ಇಂಥ ವಸ್ತುಗಳನ್ನು ಕುರಿತು ಇವನು ಬರೆದ ಕವನಗಳು, ಮಹಾಯುದ್ಧದ ಅನುಭವದಲ್ಲಿ ಮುಳುಗಿದ್ದ ದೇಶದಲ್ಲಿ ಬಹುಜನರ ಮನಸ್ಸನ್ನು ಸೆಳೆದವು. ತನ್ನ ಕವನಗಳನ್ನು ಬಹು ಪರಿಣಾಮಕಾರಿಯಾಗಿ ಓದುತ್ತಿದ್ದ ತಾಮಸ್ ಯುವ ಜನಾಂಗದ ಆರಾಧ್ಯಮೂರ್ತಿಯಾದ. ಅತಿ ಮದ್ಯಪಾನ, ದಾಂಪತ್ಯ ಜೀವನದಲ್ಲಿ ಕಹಿ, ಶಿಸ್ತಿಲ್ಲದ ಜೀವನ ಇವುಗಳಿಂದ ಅಕಾರ ಮರಣಕ್ಕೆ ತುತ್ತಾದ.

ಪರಿಷ್ಕರಣೆ:
ಎಲ್. ಎಸ್. ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ